ಸರಿ.. ಪತ್ರ ಬರೆಯೋದು ಬೇಡ.... ಹಳೆಯ ಪತ್ರಗಳನ್ನು ಓದದೆ ಎಷ್ಟ್ ದಿನ ಆಯಿತು...? ಪತ್ರಗಳಲ್ಲೂ ಹಲವು ವಿಧಗಳಿವೆ... ಶುದ್ಧ ವ್ಯವಹಾರಕ್ಕೆ ಬರೆದ ಪತ್ರಗಳು... ಪ್ರೇಮಕ್ಕೆ... ಮಮಕಾರಕ್ಕೆ ಆಮಂತ್ರಣಕ್ಕೆ. ಆಯಾ ವಿಷಯಕ್ಕೆ ತಕ್ಕಂತೆ... ಪತ್ರದ ಅಳತೆಯು ನಿರ್ಧಾರವಾಗುತ್ತದೆ. ಪುಟಗಟ್ಟಲೆ ಬರೆದ ಪತ್ರಗಳು ಕೆಲವೊಮ್ಮೆ ಬೋರು ಹೊಡೆಸಿರಬಹುದು.. ನೀಲಿ ಅಂತರ್ದೆಶಿಯ ಪತ್ರದ ಮಡತೆಯಲ್ಲಿ ನಾಲ್ಕೇ ಸಾಲು ನೋಡಿ ನಿರಾಸೆಯೂ ಆಗಿರಬಹುದು... ಆದರೆ ಪೋಸ್ಟ್ ಕಾರ್ಡ್ ಆಕಾರದಲ್ಲಿ ಚಿಕ್ಕದಾದರೂ... ಅದು ಹೇಳಬೇಕಾದ್ದನ್ನು ಸರಳವಾಗಿ ಹೇಳಿ ಬಿಡುತ್ತದೆ.... ಅಂಥ ಪೋಸ್ಟ್ ಕಾರ್ಡುಗಳನ್ನು... ನಮ್ಮ ತಂದೆ ಚಿನ್ನದ ಹಾಳೆಗಳೇನೋ.. ಎನ್ನುವಷ್ಟು ಜಾಗ್ರತೆಯಿಂದ ಕೂಡಿಡುತ್ತಿದ್ದಾರೆ. ೧೯೪೧ ರಿಂದ ೨೦೧೦ ರತನಕದ ಕಾರ್ಡುಗಳಿವೆ.. ಸಮಯ ಸಿಕ್ಕಾಗ.. ಮನೆಗೆ ಯಾರಾದರು ಬಂದಾಗ ಫೋಟೋ ಅಲ್ಬುಮ್ ಗಳಂತೆ ಈ ಪೋಸ್ಟ್ ಕಾರ್ಡ್ ಗಳು ನೆನಪ ಬುತ್ತಿಯನ್ನು ಬಿಚ್ಚಿಡುತ್ತವೆ.... ಪೋಸ್ಟ್ ಕಾರ್ಡ್ ಗಳಲ್ಲಿ ಬರೆದವರು ಪಾತ್ರಗಳಾದವರು..... ಹಲವರು... ಕೆಲವರ ಬದುಕು ಸಂಪೂರ್ಣ ಬದಲಾಗಿದೆ... ಕೆಲವರು ಈಗ ಬದುಕೇ ಇಲ್ಲ ...ಅವೆಲ್ಲ ಪತ್ರಗಳನ್ನು ಓದಿದ ನಂತರ ಹಲವು ಭಾವಗಳು ಮನದಲ್ಲಿ ಹಾದು ಹೋಗುತ್ತವೆ... ಅಂಥ ಮೂರು ದಶಕಗಳ ಪ್ರತಿನಿಧಿಗಳಂತೆ... ಮೂರು ಕಾರ್ಡ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ... ಹೆಚ್ಹು ಸೆಳೆದಿರುವ ...ಮತ್ತು ಕಾರ್ಡ್ ಓದಿದ ನಂತರ ನಡೆದ ಘಟನೆಯನ್ನು ಅರಿಯಲು ಪ್ರಯತ್ನಿಸಿ.. ಬದುಕನ್ನು... ಕೆಲ ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ... ಕಾಲ ಸವೆದು ಹೋಗಿದೆ... ಬದುಕು ಈ ಕಾರ್ಡ್ ಗಳಲ್ಲಿ ಉಳಿದು ಹೋಗಿದೆ.... ಪೋಸ್ಟ್ ಕಾರ್ಡ್ -1 ಸಾಂಪ್ರತ ೧೭/೦೨/೧೯೭೦ .............................................. ................................................ ಮಂಜಗುಣಿಯಲ್ಲಿ ವರನೊಬ್ಬನಿರುವ ಬಗ್ಗೆ ಗೊತ್ತಾಗಿದೆ.. ಅಮ್ಮ ಹೇಳುವಂತೆ ಸೌ.ಕಮಲಿನಿ ಗೆ ಈ ಸಂಬಂಧ ಹೇಳಿ ಮಾಡಿಸಿದ್ದಂಥದ್ದು ವರ ಪೋಸ್ಟ್ಮ್ ಮನ್ ನಾಗಿ ಕೆಲಸ ಮಾಡುತ್ತಿದ್ದು ತನ್ನದೇ ಸ್ವಂತ ಜಮೀನು ಹೊಂದಿದ್ದಾನೆ. ತಂದೆ ಇಲ್ಲ ತಾಯಿಯು ವಯಸ್ಸಾದುದರಿಂದ ಆದಷ್ಟು ಬೇಗ ಮದುವೆ ಮಾಡಿಬಿಡಬೇಕು. ಎಂಬದು ಹುಡುಗನ ದೊಡ್ಡಪ್ಪನ ವಿಚಾರ. ಆದಕಾರಣ ತಾವು ಮತ್ತು ಅಕ್ಕ ಬಂದು ಅಮ್ಮನೊಂದಿಗೆ ಮಂಜುಗುಣಿ ಗೆ ಹೋಗಿ ಬನ್ನಿ.. ಮತ್ತೇನು ವಿಶೇಷವಿಲ್ಲ. ನಮ್ಮ ಮನೆಯ ಕೆಂಪಿ ಕಂದು ಹಾಕಿತು. ಇದು ಎರಡನೇ ಸಲ. ಮತ್ತೆ ಹೀಗೆ ಆದರೆ ಅದನ್ನು ಮಾರಾಟ ಮಾಡುವುದು ಎಂಬ ಆಲೋಚನೆ ಇದೆ...... ಮಕ್ಕಳಿಗೆಲ್ಲ ಆಶಿರ್ವಾದ.. ಮತ್ತು ಪ್ರೀತಿ.... ಮತ್ತೆಲ್ಲ ಆರಂ ಇಂತಿ ತಮ್ಮ ರಾಮದಾಸ. ...............................ಕಮಲಿನಿಗೆ ಮದುವೆ ಗೊತ್ತಾಯಿತು ...ಅದು ಎರಡನೇ ಸಂಬಂಧ. ಮೊದಲೇ ೪ ಮಕ್ಕಳಿದ್ದವು... ಆಕೆ ಒಪ್ಪುವ ಮೊದಲೇ ತನ್ನ ಮನದಲ್ಲಿದ್ದದ್ದನ್ನು ಹೇಳಿ ಬಿಟ್ಟಿದ್ದಳು.. ೪ ಮಕ್ಕಳಿಗೆ ತಾಯಿ ಆಗಲೂ ನಾ ಸಿದ್ಧ.. ಆದ್ದರೆ ವರನಿಗೆ ಕುಡಿತದ ಅಭ್ಯಾಸವೊಂದು ಇರದಿದ್ದರಷ್ಟೇ.. ಸಾಕು. ..ಮನೆಯಲ್ಲಿ ತನ್ನ ಬೆನ್ನಿಗೆ ವಯಸ್ಸಿಗೆ ಬಂದ ತಂಗಿಯರು.. ತಮ್ಮಂದಿರು... ತನ್ನನ್ನು ಮದುವೆ ಆಗುವವ ಒಳ್ಳೆ ಅನುಕೂಲಸ್ಥ.. ತನ್ನಿಂದ ತವರಿನ ಪರಿಸ್ಥಿತಿ ಸುಧಾರಿಸಿದರೆ ಅದೇ ಒಂದು ನೆಮ್ಮದಿ.... ಮಕ್ಕಳೇನು? ಇಲ್ಲಿ ಚಿಕ್ಕ ತಂಗಿ ತಮ್ಮಂದಿರನ್ನು ಸಾಕಿಲ್ಲವೇ? ಹಾಗೆ.. ಮುದ್ದು ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ... ಸಂಬಂಧ ತಂದವ ಹತ್ತಿರದ ಸಂಬಂಧಿ... ಎಲ್ಲಕ್ಕೂ ಹೂ ಅಂದು ಅದನ್ನು ಹೊಂದಿಸಿದ್ದ ..ಮದುವೆಯು ಆಯ್ತು... ಮೊದಲ ವಾರದಲ್ಲೇ.. ಗೊತ್ತಾಯಿತು.. ತಾನು ಏನು ಇರಬಾರದು ಅಂದು ಕೊಂಡಿದ್ದಳೋ.. ಅದರ ನಶೆಯಲ್ಲೇ... ಮತ್ತ ....ತೂ..ರಾ..ಡು...ತ್ತ..... ನಾಲ್ಕು ವರ್ಷದಲ್ಲಿ ಎರಡು ಮಕ್ಕಳು... ಬದುಕು... ಹೇಗೋ ಸಾಗಿತ್ತು.... ತವರಿಗೆ ತನ್ನ ಮನೆಯ ಗುಟ್ಟು ಎಂದು ಬಿಟ್ಟು ಕೊಡಲಿಲ್ಲ... ಒತ್ತಡದಲ್ಲಿ ಒರಟು ಮಾತುಗಳು ಬರುತ್ತಿದ್ದವು.... ಒಡಲಲ್ಲಿ ಎರಡು ಮಕ್ಕಳು... ಅಷ್ಟರಲ್ಲಿ ಆತ ಇಲ್ಲವಾದ ಅನುಕೂಲಗಳೆಲ್ಲ ಮರೆಯಾದವು.. ಸಂಬಂಧಿಗಳು ಪರಿಚಯವಿಲ್ಲವೇನೋ... ಎಂಬಂತೆ ವರ್ತಿಸಿದರು.. ನಂತರ? ಕಲಿತ ಹೊಲಿಗೆ, ಕೈ ಹಿಡಿದಿತ್ತು... ಬಡತನ ಬಾಲ್ಯದಿಂದಲೇ ಸ್ವಾಭಿಮಾನ ಕಲಿಸಿತ್ತು... ಸಾಕೆ? ಅಂಗಡಿಗೆ ಸಾಮಾನು ಕಟ್ಟುವ ಕಾಗದದ ಪೊಟ್ಟಣ.. ಶಾವಿಗೆ ಹಪ್ಪಳ.. ಆಕೆ ಎಲ್ಲವನ್ನು ಮಾಡಿದಳು... ಕಷ್ಟ, ಹಾಗೆಂದರೇನು? ಊಹ್ಹ್ ಅದಾ? ನನ ಆತ್ಮೀಯ ಗೆಳತಿ... ಅನ್ನೋ ಮಟ್ಟಕ್ಕೆ ಘಟ್ಟಿ ಆಗಿತ್ತು ಮನಸು.... ಇಷ್ಟೆಲ್ಲಾ ಆದ ನಂತರ ನನಗನಿಸಿದ್ದು.....; -ಕಮಲಿನಿ ಮಂಜುಗುಣಿಯ ವರನೊಂದಿಗೆ ಮದುವೆ ಆಗಿದ್ದರೆ? ಆರಾಂ ಇರುತ್ತಿದ್ದಳೇನೋ..... ಯಾಕೆ ಆ ಸಂಬಂಧವನ್ನು ಮುಂದುವರಿಸಲಿಲ್ಲ.. ಆಕೆಯ ಬದುಕು ಏನಾಗಿ ಹೋಯ್ತು ಛೇ... ಪೋಸ್ಟ್ ಕಾರ್ಡ್ -೨ ೧೩/೮/೧೯೫೬ ಆತ್ಮೀಯ ಭಾವ, ..................ಸೌ. ಇಂದಿರೆ ಗಂಡು ಮಗುವಿಗೆ ಜನ್ಮ ನೀಡಿದ್ದು ಮತ್ತು ಯಾವುದೊ ದೈಹಿಕ ತೊಂದರೆಯಿಂದ ಶಿಶು ತೀರಿಕೊಂಡಿದ್ದು ಕೇಳಿ ಅತೀವ ಕಷ್ಟ ಎನಿಸಿತು... ನಿಮಗಾದ ಬೇಸರಕ್ಕೆ ಹೇಗೆ ಸಮಾಧಾನ ಹೇಳಬೇಕು ಎಂಬುದು ತಿಳಿಯುತ್ತಿಲ್ಲ... ನಿಮ್ಮ ಮನೆಯಲ್ಲಿ ಹಿಂಡುವ ಆಕಳೊಂದಿದೆ ಎಂಬುದನ್ನು ಮಾತು ಮಾತಲ್ಲಿ ಹೇಳಿದ ನೆನಪು.. ಸದ್ಯಕ್ಕೆ ಶಾರದೆಗೆ ಎದೆಹಾಲು ಸಾಕಾಗುತ್ತಿಲ್ಲ ಹೀಗೆ ಬಿಟ್ಟರೆ ಶಿಶು ದಿನದಿಂದ ದಿನಕ್ಕೆ ಕೃಷವಾಗುತ್ತ.. ಜೀವಕ್ಕೆನಾದರು ಆದೀತು ಎಂಬ ಹೆದರಿಕೆ ಕಾಡುತ್ತಿದೆ... ದಯಮಾಡಿ ಕೆಲದಿನಗಳ ಮಟ್ಟಿಗೆ.. ಆಕಳನ್ನು ಇಲ್ಲಿ ಕಳಿಸಿದರೆ ಜೀವ ಉಳಿಸಿದ ಪುಣ್ಯ ನಿಮಗೇ ಬರುತ್ತದೆ... ಅವಕಾಶವಾದಿ ಅಂದುಕೊಳ್ಳದೆ.. ದಯಮಾಡಿ ನನ್ನ ಅಗತ್ಯತೆ ಮನಗೊಂಡು ತಾವು ನನಗೆ... ಉಪಕರಿಸುತೀರಿ ಎಂದು ನಂಬಿದ್ದೇನೆ.. ಇಂತಿ ತಮ್ಮ ದತ್ತಾತ್ರೇಯ... ........................................ಇಂದಿರೆಗೆ ಮನಸು ಒಪ್ಪುತ್ತಿಲ್ಲ ...ಜೀವನಾಧಾರಕ್ಕೆ ಅಂತ ಇರುವುದು.. ಅದೊಂದೇ ಆಸ್ತಿ.. ಹೊಲದಲ್ಲಿ ಈ ಬಾರಿ ಬೆಳೆಯೇ ಇಲ್ಲ... ಹೈನ ಮಾರಿ ಕೊಂಚ ಅನುಕೂಲ ಆಗಿತ್ತು...... ಅದನ್ನು ಕೊಟ್ಟು ಬಿಟ್ಟರೆ? ..ವಾಪಸು ಕೊಡುತ್ತಾರೋ ಇಲ್ಲವೋ.. ಸತ್ತ ಮಗುವಿನ ದುಃಖ ಒಂದೆಡೆ ಆದರೆ ಇದ್ದವರ ಬದುಕು ನಡೆಸಬೇಕಾದ ಅನಿವಾರ್ಯತೆ ಒಂದೆಡೆ... ಸಂಬಂಧದ ಮರ್ಯಾದೆ ಒಂದೆಡೆ... ಎಷ್ಟಾದರೂ ತಂಗಿಯದೆ ಮಗು. ವಿಕಲ್ಪಗಳಿಲ್ಲದ ಸಮಸ್ಯೆ ಇರುವುದೇ? ಮಾಡುವುದಾದರೂ ಏನು? ಮರುದಿನ ನಸುಕಿಗೆ ಪತಿ.. ವೈದೇಹಿಯನ್ನು ಕರೆದುಕೊಂಡು ತಂಗಿಮನೆಗೆ ಹೊರಟುಹೋದರು... ಹೋಗುವಾಗ ವೈದೇಹಿಗೆ ಕುಂಕುಮವಿಟ್ಟು ಎರಡು ಚಮಚ ಎಣ್ಣೆ ಕಿವಿಗೆ ಬಿಟ್ಟು.. ಕಾಲ್ಮುಗಿದು.. ಬೇಗ ಬಾ... ನಿನ್ನ ಅಗತ್ಯವಿದೆ ನನಗೆ... ನೀನು ನನ್ನ ಮನೇ ಲಕ್ಷ್ಮಿ... ಅಂದು ಕಣ್ಣೀರು ಸುರಿಸಿದ್ದಳು... ಇಂದಿರೆ... ಪತಿ.. ಸುಸ್ತಾಗಿ ಬಂದು ಕಲ್ಲು ಮಂಚದ ಮೇಲೆ ಮಲಗಿದ್ದರು... ಆಸರೆಗೆ... ಮಜ್ಜಿಗೆ ಕೊಡುವಾಗ... ಮತ್ತೆಂದೋ ಹೀಗೆ ಮಜ್ಜಿಗೆ ಕೊಡುವುದು ಅನ್ನಿಸಿ ವೈದೇಹಿ ಮತ್ತೆ ಮತ್ತೆ ನೆನಪಾದಳು... ಜೊತೆಗೆ ಆಕೆಯ ಪುಟ್ಟ ಕಂದ ಸೋಮಿ..ಅಲ್ಲೊಂದು ಆಕಳು ವೈದೇಹಿಯ ಬಣ್ಣದ್ದೇ... ಅರೆ ವೈದೆಹಿಯೇ... ಕಣ್ಣಲ್ಲಿ ನೀರು.... ಮತ್ತೆ ವೈದೇಹಿ.. ಸಾಯುವವರೆಗೂ.. ಇಂದಿರೆಯ ಮನೆಯಲ್ಲೇ ಇದ್ದಳು.... ಅಲ್ಲಲ್ಲ ತನ್ನ ಮನೆಯಲ್ಲೇ ಇದ್ದಳು (ನನಗನ್ನಿಸಿದ್ದು...; -ಮನುಷ್ಯರಿಗಿಂತ ಪ್ರಾಣಿಗಳಿಗೆ ಸಂವೇದನೆ ಜಾಸ್ತಿಯೇನೋ... ತನ್ನ ಅಗತ್ಯ ನಿಜವಾಗಿ ಯಾರಿಗಿದೆ ಎಂಬುದು... ವೈದೆಹಿಯೇ ನಿರ್ಧರಿಸಿದ್ದಳು ...ಸಂಬಂಧಗಳಿಗೆ ಇಗಿರುವ ಬೆಲೆ ಏನು???) ಪೋಸ್ಟ್ ಕಾರ್ಡ್ -೩ ೨೫/೮/೧೯೬೨ ತೀರ್ಥರೂಪ ತಂದೆಯವರಲ್ಲಿ... ನಿಮ್ಮ ಮಗಳು ಬೇಡುವ ಆಶೀರ್ವಾದಗಳು... ನಾನು ಆರಾಂ ಇದ್ದೇನೆ.. ನಿಮ್ಮ ಕುಶಲತೆಯ ಬಗ್ಗೆ ತಿಳಿಸುತ್ತಿರಿ.. ಇಲ್ಲಿ ಮಳೆ ಇನ್ನು ನಿಲ್ಲುವ ಸೂಚನೆ ತೋರಿಸಿಲ್ಲ.. ಬಟ್ಟೆಗಳು ಒಣಗುತ್ತಿಲ್ಲ.. ಮನೆಮಂದಿಯ ಅಷ್ಟು ಬಟ್ಟೆಗಳನ್ನು ತೊಳೆದು ಹಾಕುತ್ತೇನೆ ಆದ್ದರಿಂದ.. ಒಣಗಿಸಲು ಜಾಗವಿಲ್ಲ... ನಾಳೆ ಬಿಸಿಲು ಬಂದರೆ ..ಮಗುವಿನ ಹೊದಿಕೆಗಳನ್ನು ತೊಳೆದು ಹಾಕಬೇಕು.. ಅತ್ತೆ.. ಶ್ರೀಮತಕ್ಕ, ವಸಂತ ಎಲ್ಲರು ಗೋಕರ್ಣ ಮುರುಡೆಶ್ವರಕ್ಕೆ ಹೋಗಿ ಬಂದರು, ಕಾಯಿ ಕೀಳುವವರು ಬರುತ್ತಾರೆ ಎಂದು ನಾನೆ ಹೋಗಲಿಲ್ಲ.. ಮಸಾಲೆ ಕಲ್ಲು ತುಂಬಾ ಸಣ್ಣದಿದೆ.. ದೊಡ್ಡ ಕಲ್ಲು ತಂದರೆ ಶೇರು ಅಕ್ಕಿಯ ದೋಸೆ ಹಿಟ್ಟು ರುಬ್ಬಬಹುದು.. ಅದಕ್ಕೆ ದೊಡ್ಡ ಕಲ್ಲು ತರುತ್ತಾರಂತೆ ಅತ್ತೆಯವರಿಗೆ ನಾನು ರುಬ್ಬಿದರೆ ಸಮಾಧಾನ.. ನಿನ್ನೆ ಬದನೇಕಾಯಿ ಬಜ್ಜಿ ಮಾಡಿ ಮಾವಿನ ಹಿಂಡಿಗೆ ಪುಡಿ ಕುಟ್ಟಿ ಇಟ್ಟಿದ್ದೆ.. ಮತ್ತೆ ಎರಡು ರೀತಿಯ ಪಲ್ಯ ಮಾಡಬೇಕಿತ್ತು ..ಶೈಲು ಕೈ ಬಿಡಲಿಲ್ಲವಾದ್ದರಿಂದ ಅತ್ತೆಯವರೇ ಮಾಡಬೇಕಾಯಿತು.. ರಾತ್ರಿಯಿಡಿ ಕೈ ನೋವು ಎಂದು ನರಳುತ್ತಿದ್ದರು.. ಪಾಪ..! ನಾನೆ ಬೀಸಿನೀರ ಶಾಖ ಕೊಟ್ಟು ಉಪ್ಪಿನ ಎಣ್ಣೆ ಹಚಿದೆ... ರಾತ್ರಿ ಇಡಿ ನಿದ್ದೆ ಮಾಡಲಿಲ್ಲ ಅವರು ಪಾಪ.! ಹಂಡೆ ದೊಡ್ಡದಿದೆ ಒಮ್ಮೆ ನೀರು ಕಾಯಿಸಿದರೆ ಮನೆಮಂದಿಗೆಲ್ಲ ಆಗುತ್ತೆ ಅಂತ ಸಂಜೆಯೇ ನೀರು ಕೆಳ ತೋಟದ ಭಾವಿಯಿಂದ ನೀರು ಸೇದಿ.. ಕಾಯಿಸಿಪ್ಪೆ ಹಾಕಿ ಹುರಿ ಹಾಕಿ ಇಡುತ್ತೇನೆ ಆದ್ದರಿಂದ...ಎಲ್ಲರ ಸ್ನಾನ ಬೇಗ ವಾಗಿ..ಕೆಲಸಕ್ಕೆ ಅನುಕೂಲವಾಗುತ್ತದೆ.. ಇದನ್ನು ವಸಂತನ ಕೈಯ್ಯಲ್ಲಿ ಪೋಸ್ಟ್ ಮಾಡಲು ಕೊಡುತ್ತೇನೆ.. ಪತ್ರವನ್ನು ತಾಯಿಯವರಿಗೂ ಓದಲು ಕೊಡಿ ಉತ್ತರ ಜರೂರ್ ಬರೆಯಿರಿ.. ತಂಗಿ ತಮ್ಮಂದಿರಿಗೆ ಪ್ರೀತಿ... ನಿಮ್ಮ ಆರೋಗ್ಯದ ಕಡೆ ಗಮನವಿರಲಿ... ನನ್ನ ಬಗ್ಗೆ ಚಿಂತೆ ಮಾಡಬೇಡಿ.. ನಾನು ಆರಾಂ ಇದ್ದೇನೆ.. ಇಂತಿ ನಿಮ್ಮ ಮಗಳು ಉಮಾ (ನನಗನ್ನಿಸಿದ್ದು.;-ಈ ಪತ್ರವನ್ನು ಅದೆಷ್ಟು ಬಾರಿ ಓದಿದ್ದೇನೆ ನನಗೆ ಗೊತ್ತಿಲ್ಲ..... ಅದೆಷ್ಟು ಗೌಪ್ಯತೆಯಿಂದ ತನ್ನ ಪರಿಸ್ಥಿತಿಯನ್ನು ತವರಿಗೆ ತಿಳಿಸಿದ್ದಾರೆ... ಪತ್ರದ ಕೊನೆಯಲ್ಲಿ ತಾಯಿಯವರಿಗೆ ಪತ್ರ ಓದಲು ಕೊಡಿ ಎಂಬುದನ್ನು ಒತ್ತಿ ಬರೆದಿದ್ದರ ಹಿಂದೆ ಅದೆಷ್ಟು ಅರ್ಥ ಅಡಗಿದೆ..? ತಂದೆ ಆದವಗೆ ..ತನ್ನ ಮಗಳು ಕೊಟ್ಟ ಮನೆಯಲ್ಲಿ ಎಲ್ಲರನ್ನು ಅರ್ಥ ಮಾಡಿಕೊಂಡು ಸಂಸಾರದ ಬಂಡಿಯನ್ನು ಸರಿದಾರಿಯಲ್ಲಿ ಒಯ್ಯುತ್ತಿದ್ದಾಳೆ ಎಂಬ ಹೆಮ್ಮೆ ಆದರೆ... ತಾಯಿಗೆ ತನ್ನ ಮದ್ದಿನ ಮಗಳು ತನ್ನ ವಯಸ್ಸಿಗಿಂತ ಮೀರಿದ ಜವಾಬ್ದಾರಿ ಹೊತ್ತು ಅದೆಷ್ಟು ಕಷ್ಟ ಪಡುತ್ತಿದ್ದಾಳೆ.. ಎಂಬ ಸಂಕಟ... ಹೆಣ್ಣು ಜೀವ ಅದೆಷ್ಟು ಸಂವೇದನಾಶೀಲ, ಎಲ್ಲಿ ಏನು ಎಷ್ಟು ಇರಬೇಕೋ ಅಷ್ಟಷ್ಟೇ ಒದಗಿಸುವ.... ಒಂದು ನಿಸ್ಪೃಹ ಜೀವ ...ಆದರೆ ಶ್ರೇಯಸ್ಸು ಮಾತ್ರ ಯಾವತ್ತು ಅವಳ ಪಾಲಿಗಿಲ್ಲ ....) ಇನ್ನೂ ಇವೆ ಪೋಸ್ಟ್ ಕಾರ್ಡ್ ಗಳು ಅದರಲ್ಲಿ ....ಸುಮಾರು ಹಲವಾರು ಬದುಕುಗಳು ಅವನ್ನು ಹುಡುಕುತ್ತ ಅವರಲ್ಲಿ ನನ್ನ ಅನ್ವೇಷಿಸುವ ನಾನು......http://kendasampige.com/ ---- ಪ್ರಕಟವಾದ ಲೇಖನ | |||||||
(Affilated to National Federation of Postal Employees) Be Proud to be a Member Of AIPE Union
Monday, September 26, 2011
ಪೋಸ್ಟ್ ಕಾರ್ಡ್ ನಲ್ಲಿ ಉಳಿದುಹೋದ ಬದುಕು: ಅಮಿತಾ ನೆನಪು
Subscribe to:
Post Comments (Atom)
No comments:
Post a Comment