Monday, December 31, 2012

2013-ಹೊಸವರ್ಷ ಹೊಸತನಕ್ಕೆ ಸಾಕ್ಷಿಯಾಗಲಿ...



                     ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
 (-ಕುವೆಂಪು)
              
 ಕ್ಯಾಲೆಂಡರ್ ಬದಲಿಸುವ ಸಮಯ ಮತ್ತೆ ಬಂದಿದೆ...ಜನವರಿ 2013!!
ಅಂತೂ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ..
ಮೊನ್ನೆ ಮೊನ್ನೆ ಶುರುವಾಗಿದ್ದು ಅಲ್ವಾ ಅಂತ ಅನಿಸುವ 2012ರಲ್ಲಿ ಒಂದಷ್ಟು ಒಳ್ಳೆಯದು...ಹಾಗೂ ಇನ್ನೊಂದಿಷ್ಟು ಘಟಿಸಬಾರದಂತಹ ಘಟನೆಗಳು ಆಗಿ ಹೋಗಿವೆ.ವಾರದಿಂದೀಚೆಗೆ ದಿನ ಪತ್ರಿಕೆಗಳಲ್ಲಿ ,ಟಿ.ವಿ.ಮಾಧ್ಯಮಗಳಲ್ಲಿ ಇವುಗಳ ವಿಮರ್ಶೆ ಆಗಿದೆ..ಆಗುತ್ತಿದೆ.ತನ್ನ ಅಪರಿಮಿತ ಬುದ್ಧಿಶಕ್ತಿಯಿಂದಾಗಿ ಆದಿಮಾನವ ಸ್ಥಿತಿಯಿಂದ ಕಂಪ್ಯೂಟರ್ ಯುಗದಲ್ಲಿರುವ ನಾವು,ಇಡೀ ವಿಶ್ವವೇ ಬೆರಳ ತುದಿಯಲ್ಲಿ ಎನ್ನುವ ಈ ಸ್ತಿತಿ ತಲುಪಿರುವ ನಾವು,ಈ ನಡುವೆ ಇಂತಹ ಸಹಸ್ರಾರು ವರ್ಷಗಳನ್ನೇ ದಾಟಿ ಬಂದಿದ್ದೇವೆ.ಇಂದು ಇಂದೆನ್ನುವ ಈ 'ಇಂದು' ನಾಳೆ 'ನಿನ್ನೆ'ಯಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ.
ಹೆಸರಿಲ್ಲದೆ ಹುಟ್ಟುವಲ್ಲಿಂದ,ಆ ಹಸುಗೂಸಿನ ಸ್ತಿತಿಯಿಂದ ನಾವು,ನಮ್ಮ ವ್ಯಕ್ತಿತ್ವ ಬೆಳೆಯುತ್ತ ಹೋಗುತ್ತದೆ;ಅನೇಕ ಘಟನೆಗಳು,ವಿಚಾರಗಳು,ಅನುಭವಗಳನ್ನು ಮನಸ್ಸಿನಲ್ಲಿ ಮುದ್ರಿಸಿಕೊಂಡಿರುತ್ತೇವೆ ನಿಜ-ಆದರೆ ಮನಸ್ಸಿನ ಅಂತರ್ಯದಲ್ಲಿ ನಿಕ್ಷಿಪ್ತವಾಗಿರುವ ಇಂತಹ ವಿಚಾರ,ಅನುಭವಗಳಿಂದ ನಾವು ಕಲಿತಿರುವುದು ಏನು ಎಂಬುದು ಪ್ರಮುಖ ವಿಷಯ!!ಪುಣ್ಯವೋ ಪಾಪವೋ ಗೊತ್ತಿಲ್ಲ ...ಅಂತೂ ಈ ಭೂಮಿ ಮೇಲೆ ಹುಟ್ಟಿದ್ದೇವೆ,ಸಮಯದ ಉರುವಿಕೆಯಲ್ಲಿ ಬದುಕು ಕಟ್ಟಿಕೊಳ್ಳುವುದು,ಕನಸನ್ನು ನಿಜಮಾಡಿಕೊಳ್ಳುವುದು ಹೀಗೆ ಅನೇಕ ಅಗತ್ಯಗಳನ್ನು ಪೂರೈಸುವಾಗ ಶಾಲೆ,ಕಾಲೇಜು,ಉದ್ಯೋಗ,ಸಂಸಾರ ಎನ್ನುತ್ತಾ ದಿನ ಕಳೆಯುತ್ತದೆ.ಒಂದು ದಿನ ಬದುಕೇ ಮುಗಿದು ಹೋಗುತ್ತದೆ!ವೇಗದ ಜಗತ್ತಿನಲ್ಲಿರುವ ನಾವು ಸಾಮರ್ಥ್ಯ ಕಡಿಮೆಯಾಗುವುದೋ,ಆರೋಗ್ಯ ಕುಗ್ಗುವುದೋ,ಅಸಹಾಯಕನೆನಿಸಿಕೊಳ್ಳುತ್ತೇನೋ,ಅಂದುಕೊಂಡಿದ್ದನ್ನು ಸಾಧಿಸುತ್ತೇನೋ ಇಲ್ಲವೋ ಎಂಬ ಋಣಾತ್ಮಕ ಅಂಶಗಳನ್ನು ‘ಇಲ್ಲ ಹಾಗಾಗದಂತೆ ನಡೆದುಕೊಳ್ಳಬೇಕು..’ಎಲ್ಲ ಕ್ಷಣಗಳನ್ನು ಶುಭವೆಂದು ಖುಷಿಯಿಂದ ಅನುಭವಿಸಬೇಕೆಂಬ ಧನಾತ್ಮಕ ಚಿಂತನೆ ಅದ್ಭುತ...ಅಲ್ವಾ? ಹೊಸವರ್ಷದಲ್ಲಿ ಆ ಖುಷಿ ಎಲ್ಲರದಾಗಲಿ!

 ಕುವೆಂಪು ಅವರ ವಿಶ್ವಮಾನವತೆಯ ಸಂದೇಶ:
ಓ ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆ ಮತದ ಸಹವಾಸ
ಸಾಕಿನ್ನು ಸೇರಿ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವ ಪಥಕೆ

ಈ ನುಡಿಯೊಂದಿಗೆ, ಹೊಸ ವರುಷವನ್ನು ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.ಆತ್ಮೀಯ ಓದುಗರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ನೆನಸಿದ್ದು ನನಸಾಗಲಿ. ಶುಭವಾಗಲಿ ಎಂದು ಹಾರೈಸುತ್ತ........V.PURUSHOTHAM