Tuesday, August 9, 2011

ಅಮೆರಿಕದ ಋಣಭಾರ ಸಾಮರ್ಥ್ಯ ಕುಗ್ಗಿದರೆ ನಮ್ಗೆ ಲಾಭ!

         US Credit Downgrade effects on India              ಬೆಂಗಳೂರು ಆ.9: ಅಮೆರಿಕದ ಋಣಭಾರ ಸಾಮರ್ಥ್ಯ ಕುಸಿತವಾದರೆ ಎಲೆಕ್ಟ್ರಾನಿಕ್ ಸಿಟಿಯ ಹತ್ತಾರು ಕಂಪನಿಗಳು ತಲೆ ಮೇಲೆ ಕೈ ಹೊತ್ತುಕೊಂಡು ಕೂರಬೇಕೇ ಹೊರತು ಜನಸಾಮಾನ್ಯರು ರೋದಿಸಬೇಕಿಲ್ಲ. ಯುಎಸ್ ಆರ್ಥಿಕ ದಿವಾಳಿಯಾದರೆ ಭಾರತಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚು.

ಎರಡನೇ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಭೀತಿಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿನ ಕಂಪನಗಳು ಸೋಮವಾರದಂತೆ ಮಂಗಳವಾರವೂ ಮುಂದುವರೆದಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 16,857.91 ಗಡಿಗಿಂತ ಕೆಳಗೆ ಇಳಿಯಿತು. ಡಾಲರ್ ಎದುರು ರುಪಾಯಿ 23 ಪೈಸೆಗಳಷ್ಟು ಕುಸಿದಿದೆ. ಆದರೆ ಚಿನ್ನ ಮಾತ್ರ ರೂ 26 ಸಾವಿರದ ಗಡಿ ದಾಟಿದೆ.

ಎಸ್‌ಆಂಡ್‌ಪಿ ಸಲಹೆ: ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ 'ಸ್ಟ್ಯಾಂಡರ್ಡ್ ಅಂಡ್ ಪೂರ್ಸ್‌` (ಎಸ್‌ಅಂಡ್‌ಪಿ) ಅಮೆರಿಕದ ಸಾಲ ಯೋಗ್ಯತೆ ಮಟ್ಟವನ್ನು 'ಎಎಎ' ಶ್ರೇಣಿಯಿಂದ 'ಎಎ+' ಸ್ಥಾನಕ್ಕೆ ಇಳಿಸಿದೆ. ಬಹುಶಃ ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆ ಮೊದಲು ಸಿಕ್ಕಿದ್ದು ಬರಾಕ್ ಒಬಾಮಾ ಅವರಿಗೆ ಎನ್ನಬಹುದು. ದೇಶಿ ಉದ್ಯೋಗಗಳ ನೇಮಕಾತಿಗೆ ಒತ್ತು ನೀಡುವಂತೆ ಅಧಿಕಾರಕ್ಕೆ ಬಂದ ಹೊಸತರಲ್ಲೇ ಕರೆ ನೀಡಿದ್ದರು.

ಆರ್ಥಿಕತೆಯನ್ನು ವಿಸ್ತರಿಸುವುದು ಮತ್ತು ಉದ್ಯೋಗ ಸೃಷ್ಟಿ ದೇಶದ ತುರ್ತು ಅಗತ್ಯ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತೊಮ್ಮೆ ಹೇಳಿದ್ದಾರೆ. ಅಮೆರಿಕದಲ್ಲಿ 68 ದಶಲಕ್ಷ ನಿರುದ್ಯೋಗಿಗಳಿದ್ದಾರೆ. ಕಡಿಮೆ ನೌಕರಿ ಮತ್ತು ಕಡಿಮೆ ದುಡಿಮೆ ಜೀವನಶೈಲಿಯಿಂದ ದೇಶದ ಆದಾಯ ಕುಸಿದಿದೆ. ಅಂತರಿಕ ವರಮಾನ ಹೆಚ್ಚಳ ಕಾಣದಿದ್ದಾರೆ ಅಮೆರಿಕವಷ್ಟೇ ಅಲ್ಲ ಅಮೆರಿಕವನ್ನು ನಂಬಿಕೊಂಡು ಬದುಕುತ್ತಿರುವ ಭಾರತದ ಹೊರಗುತ್ತಿಗೆ ಕಂಪನಿಗಳೂ ಕೂಡಾ ಬಾಗಿಲು ಹಾಕಿಕೊಂಡು ಮನೆಗೆ ಹೋಗಬೇಕಾಗುತ್ತದೆ.

ಭಾರತಕ್ಕೆ ಹೇಗೆ ಲಾಭ: ಭಾರತದಂಥ ದೇಶಗಳು ಆಂತರಿಕ ವರಮಾನ ಮೂಲಗಳನ್ನು ಬಳಸಿಕೊಂಡು ಆರ್ಥಿಕತೆ ಬಲಪಡಿಸಿಕೊಳ್ಳಬೇಕು. ಅಮೆರಿಕದ ಆರ್ಥಿಕ ಬಿಕ್ಕಟ್ಟು ಭಾರತದ ಆರ್ಥಿಕ ವೃದ್ಧಿಗೆ ಪೂರಕವಾಗಿರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಕಾಣುತ್ತಿದೆ. ಅಮೆರಿಕದ ಆರ್ಥಿಕತೆ ಕುಸಿಯುತ್ತಿರುವುದರಿಂದ ಕಚ್ಚಾ ತೈಲದ ಬೇಡಿಕೆ ಕಡಿಮೆಯಾಗಿ ಬೆಲೆ ಅಗ್ಗವಾಗಲಿದೆ.

ಇದರಿಂದ ಹಣದುಬ್ಬರ ಮೇಲಿನ ಒತ್ತಡ ತಗ್ಗಲಿದೆ. ವಿದೇಶಿ ಬಂಡವಾಳ ಕಮ್ಮಿಯಾದರೂ ಆಂತರಿಕ ಬಂಡವಾಳ ಹೂಡಿಕೆ ಹೆಚ್ಚಳಗೊಳಿಸುವ ಮೂಲಕ ಆರ್ಥಿಕ ಭದ್ರತೆ ಕಾಯ್ದುಕೊಳ್ಳಬಹುದು. ಐಟಿ ಬಿಟಿ ಕ್ಷೇತ್ರವನ್ನು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಬಹುತೇಕ ಸ್ವಾವಲಂಬನೆ ಹೊಂದುವುದು ಎಷ್ಟು ಮುಖ್ಯ ಎಂಬುದರ ನಿಜ ಅರಿವು ಈಗ ಆಗಲಿದೆ ಎಂದು ಪ್ರಧಾನಿ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ.
           courtesy-oneindia.com

No comments:

Post a Comment