Tuesday, July 10, 2012

ಷೇರು ಎಂದರೇನು? ಮಾರುಕಟ್ಟೆ ಬಗ್ಗೆ ತಿಳಿಯಿರಿ

ಬಹುಪಾಲು ಜನರಿಗೆ ಷೇರುಪೇಟೆಯೆಂದರೆ ಅಚ್ಚರಿ. ಅಲ್ಲಿನ ಕರಡಿ/ಗೂಳಿ ಕುಣಿತಗಳು, ದುಡ್ಡು ಗಳಿಸೋ/ಕಳೆದುಕೊಳ್ಳುವ ಪ್ರಕ್ರಿಯೆಗಳು ಅರ್ಥವಾಗುವುದೇ ಇಲ್ಲ. ಹಾಗಂತ ಷೇರು ಸಾಮ್ರಾಜ್ಯಕ್ಕೆ ಪ್ರವೇಶಿಸಿ ಹಣ ಗಳಿಸುವುದು/ಕಳೆದುಕೊಳ್ಳುವುದು ಕಷ್ಟವೇನೂ ಅಲ್ಲ. ಎಲ್ಲದಕ್ಕೂ ಮೊದಲು ಷೇರು ಎಂದರೇನು ತಿಳಿದುಕೊಳ್ಳೋಣ.
ನೀವೊಂದು ಅಂಗಡಿ ತೆರೆಯಲು ನಿರ್ಧರಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಅಂಗಡಿ ಹೆಸರು "ಎ" ಎಂದಿರಲಿ. ಅದಕ್ಕೆ ಕಡಿಮೆಯೆಂದ್ರೂ ಒಂದು ಲಕ್ಷ ರುಪಾಯಿ ಬೇಕು. ನಿಮ್ಮಲ್ಲಿ 50 ಸಾವಿರ ರುಪಾಯಿ ಇದೆ. ಉಳಿದ ದುಡ್ಡನ್ನು ಕುಟುಂಬ ಸದಸ್ಯರಿಂದ ಪಡೆಯುತ್ತೀರಿ. ಈ ಮೂಲಕ ನಿಮ್ಮ ಅಂಗಡಿಯಲ್ಲಿ ನಿಮ್ಮ ಕುಟುಂಬ ಸದಸ್ಯರ ಪಾಲೂ ಇದೆ ಎಂದಾಯಿತು. ಅವರೆಲ್ಲರೂ ಎ ಕಂಪನಿಯ ಷೇರುದಾರರು.
ಹೂಡಿಕೆ ಮಾಡಿದ ಇತರರಿಗೂ ಅಂಗಡಿಯ ಲಾಭ ನಷ್ಟದಲ್ಲಿ ಪಾಲು ನೀಡುವುದು ಧರ್ಮ. ಅದಕ್ಕಾಗಿ ಷೇರು ಎಂಬ ದಾಖಲೆ ಪತ್ರ ಮಾಡಬೇಕು. ಒಂದು ಷೇರು ಪತ್ರದ ಮೌಲ್ಯ ಹತ್ತು ರುಪಾಯಿ ಎಂದಿಟ್ಟುಕೊಳ್ಳೋಣ. ಅಂದ್ರೆ 1 ಲಕ್ಷ ರುಪಾಯಿಗೆ 10 ಸಾವಿರ ಷೇರುಗಳು ಬೇಕು (1,00,000/10 = 10,000 ಷೇರು).
"ಎ" ಅಂಗಡಿ ತೆರೆದ ಪ್ರವೀಣ ಅದಕ್ಕೆ 50 ಸಾವಿರ ರುಪಾಯಿ ಹೂಡಿಕೆ ಮಾಡಿದ್ದಾನೆ. ಹೀಗಾಗಿ ಅಂಗಡಿಯ 5 ಸಾವಿರ ಷೇರು ಅವನ ಜೇಬಿಗೆ(50,0000/10). ಮಹೇಶ 20 ಸಾವಿರ ರುಪಾಯಿ ಹಾಕಿದ್ರೆ ಆತನಿಗೆ 2 ಸಾವಿರ ಷೇರು ದೊರಕುತ್ತದೆ. 1 ಸಾವಿರ ರುಪಾಯಿ ನೀಡಿದವರಿಗೆ ಹತ್ತು ರುಪಾಯಿ ಮುಖಬೆಲೆಯ ನೂರು ಷೇರು ನೀಡಿದರಾಯಿತು.
ಅಂಗಡಿಯ ಲಾಭ ಅಥವಾ ನಷ್ಟಕ್ಕೆ ತಕ್ಕಂತೆ ಆ ಷೇರುಗಳ ಮೌಲ್ಯವಿರುತ್ತದೆ. ಒಂದು ವರ್ಷ ಕಳೆದು ಎ ಅಂಗಡಿ/ಕಂಪನಿಯ ಮೌಲ್ಯ 2 ಲಕ್ಷ ಆಗಿದ್ದರೆ ಷೇರುಗಳ ಮೌಲ್ಯ ದುಪ್ಪಟ್ಟು ಆಗಿರುತ್ತದೆ. ಅಂಗಡಿ ನಷ್ಟದಲ್ಲಿದ್ದರೆ, ಅಂಗಡಿ ಮೌಲ್ಯ 50 ಸಾವಿರ ರುಪಾಯಿಗೆ ಕುಸಿದಿದ್ದರೆ ಷೇರುಗಳ ಮೌಲ್ಯ 10 ರು. ಇದ್ದದ್ದು 5 ರುಪಾಯಿಗೆ ಇಳಿಯುತ್ತದೆ.
ಹೀಗಾಗಿ ಷೇರು ಎಂದರೆ ಕಂಪನಿಯ ಲಾಭ ನಷ್ಟಕ್ಕೆ ತಕ್ಕಂತೆ ಮೌಲ್ಯ ಪಡೆಯುವ/ಕಳೆದುಕೊಳ್ಳುವ ಒಂದು ಸಾಧನ ಎನ್ನಬಹುದು.
ಕಂಪನಿಯು ಒಂದು ವರ್ಷದಲ್ಲಿ ಸರಕಾರಕ್ಕೆ ತೆರಿಗೆ ಕಟ್ಟಿ 50 ಸಾವಿರ ರುಪಾಯಿ ಲಾಭ ಪಡೆದಿದ್ರೆ ಪ್ರತಿಷೇರಿಗೆ ಲಾಭ 5 ರುಪಾಯಿ ಹೆಚ್ಚಾಯಿತು. (ತೆರಿಗೆ ನಂತರದ ಲಾಭ/ಷೇರುಗಳ ಸಂಖ್ಯೆ, 50,000 ರು./10,000= ಪ್ರತಿಷೇರಿಗೆ ಗಳಿಕೆ ಐದು ರುಪಾಯಿ)
ಹೆಚ್ಚುವರಿಯಾಗಿ ಈ ಲಾಭ ಸಿಕ್ಕಿದೆ. ಇದನ್ನು ಪಾಲುದಾರರಿಗೆ ಡಿವಿಡೆಂಟ್ ರೂಪದಲ್ಲಿ ಹಂಚಿಕೆ ಮಾಡಬಹುದು. ಅಥವಾ ಕಂಪನಿ ವಿಸ್ತರಣೆಗಾಗಿ ವಿನಿಯೋಗ ಮಾಡಿಕೊಳ್ಳಬಹುದು. ಅಥವಾ ಕಂಪನಿಯು ಇನ್ನಷ್ಟು ಜನರಿಗೆ ಹೂಡಿಕೆ ಮಾಡಲು ಆಮಂತ್ರಣ ನೀಡುವ ಮೂಲಕ ವಿಸ್ತರಣಾ ಯೋಜನೆ ಕೈಗೊಳ್ಳಬಹುದು.
ಈ ಕಂಪನಿಯು ಷೇರು ವಿನಿಮಯ ಸಂಸ್ಥೆಯ ಮಾನದಂಡಗಳಿಗೆ ತಕ್ಕಂತೆ ಇದ್ದರೆ ಈ ಕಂಪನಿಯನ್ನು ಎನ್ಎಸ್ಇ/ಬಿಎಸ್ಇ ಇತ್ಯಾದಿ ವಿನಿಮಯ ಸಂಸ್ಥೆಗಳಲ್ಲಿ ಲಿಸ್ಟ್ ಮಾಡಬಹುದು. ಅಂದಿನಿಂದ ಅದು ಸಾರ್ವಜನಿಕ ವಹಿವಾಟುದಾರ ಕಂಪನಿಯಾಗುತ್ತದೆ.
ಷೇರು ಪೇಟೆಯಲ್ಲಿ ಲಿಸ್ಟ್ ಮಾಡುವ ಈ ಪ್ರಕಿಯೆಗೆ ಐಪಿಒ ಎನ್ನುತ್ತಾರೆ. ಐಪಿಒ ಅಂದರೆ ಸಾರ್ವಜನಿಕ ಷೇರು ವಿತರಣೆ. ಎ ಕಂಪನಿಯಲ್ಲಿ ಹೂಡಿಕೆ ಮಾಡಲು ಇಷ್ಟಪಡುವರನ್ನು ಐಪಿಒ ಮೂಲಕ ಅಹ್ವಾನಿಸಬಹುದು. ಇಷ್ಟವಿದ್ದವರು ಐಪಿಒ ಮೂಲಕ ಖರೀದಿಸುತ್ತಾರೆ.
ಸಾರ್ವಜನಿಕ ವಹಿವಾಟುದಾರ ಕಂಪನಿಯು ಎಲ್ಲಿ ಲಿಸ್ಟ್(ಉದಾಹರಣೆಗೆ ಎನ್ಎಸ್ಇ/ಬಿಎಸ್ಇ) ಆಗಿರುವುದೋ ಅಲ್ಲಿಯೇ ಷೇರುಗಳ ಮಾರಾಟ/ಖರೀದಿ ಮಾಡಲಾಗುತ್ತದೆ. ನೀವು ಖರೀದಿ/ಮಾರಾಟಕ್ಕೆ ಯತ್ನಿಸಿದಾಗ ಬ್ರೋಕರ್ ಮಧ್ಯವರ್ತಿಯಾಗಿ ವರ್ತಿಸುತ್ತಾನೆ. ಇದಕ್ಕೆ ಪ್ರತಿಫಲವಾಗಿ ಬ್ರೋಕರುಗಳು ಕಮಿಷನ್, ಶುಲ್ಕ ಪಡೆಯುತ್ತಾರೆ.
ಬಹುಶಃ ನಿಮಗೀಗ ಷೇರುಪೇಟೆ ಎಂದರೇನು? ಎಂಬ ಅಂದಾಜು ಸಿಕ್ಕಿರಬಹುದು. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಡಿಮ್ಯಾಟ್ ಎಂಬ ಖಾತೆ ತೆರೆಯಬೇಕು. ಡಿಮ್ಯಾಟ್ ಖಾತೆ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಪ್ರವೇಶಿಸಿರಿ.

No comments:

Post a Comment