Tuesday, March 15, 2011

ಭಾರತಕ್ಕೆ ಸುನಾಮಿ ಭೀತಿಯಿಲ್ಲ: ಸುನಾಮಿ ಕೇಂದ್ರ ಸ್ಪಷ್ಟನೆ

ಜಪಾನ್‌ ಮೇಲೆ ಅಪ್ಪಳಿಸಿ ನೂರಾರು ಊರುಗಳನ್ನು ಕಬಳಿಸಿರುವ ಭೀಕರ ಸುನಾಮಿ ಭೀತಿ ಸದ್ಯಕ್ಕೆ ಭಾರತಕ್ಕಿಲ್ಲ ಎಂದು ಭಾರತೀಯ ಸುನಾಮಿ ಕೇಂದ್ರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಪಾನ್‌ನ ಈಶಾನ್ಯ ಕರಾವಳಿ ಮೇಲೆ ಶುಕ್ರವಾರ ಅಪ್ಪಳಿಸಿರುವ ಸುನಾಮಿ ಸಾವಿರಾರು ಮಂದಿಯ ಪ್ರಾಣಗಳನ್ನು ಅಪೋಶನ ತೆಗೆದುಕೊಂಡಿದ್ದು, ಇದು ಭಾರತದಲ್ಲೂ ಸಂಭವಿಸಬಹುದೇ ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು (India Tsunami Centre) ಸ್ಪಷ್ಟನೆ ನೀಡಿದ್ದಾರೆ.

ಜಪಾನ್ ಏಷಿಯಾದ ಪ್ರಮುಖ ರಾಷ್ಟ್ರ. ಇದೀಗ ಅಪ್ಪಳಿಸಿರುವ ಸುನಾಮಿ ಇಂಡೋನೇಷಿಯಾ, ಹವಾಯಿ ದ್ವೀಪ, ತೈವಾನ್, ಫಿಲಿಪೈನ್ಸ್, ರಷ್ಯಾ ಮುಂತಾದ ರಾಷ್ಟ್ರಗಳ ಕರಾವಳಿ ಮೇಲೂ ಅಪ್ಪಳಿಸುವ ಭೀತಿಗಳಿವೆ. ಈ ಬಗ್ಗೆ ಈಗಾಗಲೇ ಕಟ್ಟೆಚ್ಚರ ರವಾನಿಸಲಾಗಿದೆ. ಆದರೆ ದಕ್ಷಿಣ ಏಷಿಯಾದ ಪ್ರಮುಖ ರಾಷ್ಟ್ರವಾಗಿರುವ ಭಾರತಕ್ಕೆ ಯಾವುದೇ ಭೀತಿಯಿಲ್ಲ. ಹಾಗಾಗಿ ಭಾರತೀಯ ಕರಾವಳಿ ಪ್ರದೇಶಗಳಿಗೆ ಕಟ್ಟೆಚ್ಚರ ರವಾನಿಸಿಲ್ಲ ಎಂದು ಭಾರತೀಯ ಸುನಾಮಿ ಕೇಂದ್ರ ಹೇಳಿದೆ.

ಈ ಹಿಂದೆ 2004ರಲ್ಲಿ ಸಂಭವಿಸಿದ ಭೀಕರ ಸುನಾಮಿಯಿಂದಾಗಿ ಭಾರತವೊಂದರಲ್ಲೇ 16,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇದರಲ್ಲಿ ಅತಿ ಹೆಚ್ಚು ಪ್ರಾಣ ಕಳೆದುಕೊಂಡ ರಾಜ್ಯ ತಮಿಳುನಾಡು. ಇಲ್ಲಿ ಸುಮಾರು 8,000 ಮಂದಿ ಬಲಿಯಾಗಿದ್ದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 7,000, ಪಾಂಡಿಚೇರಿಯಲ್ಲಿ 700, ಆಂಧ್ರಪ್ರದೇಶ ಮತ್ತು ಕೇರಳಗಳಲ್ಲಿ ತಲಾ 100ರಷ್ಟು ಮಂದಿ ಸಾವನ್ನಪ್ಪಿದ್ದರು.

 

No comments:

Post a Comment