- ಎ.ಆರ್. ಮಣಿಕಾಂತ್
ಹೌದಲ್ವ? ನೀನೀಗ ಅಪರಿಚಿತ ಆಗ್ತಾ ಇದೀಯ. ಅಪರೂಪಕ್ಕೆ ಮಾತ್ರ ಸಿಕ್ತಾ ಇದೀಯ. ಈ ಹಿಂದೆ ಒಂದು ದಿನವೂ ತಪ್ಪದೆ ಮಟಮಟ ಮಧ್ಯಾಹ್ನವೇ ಮನೆಮುಂದೆ ನಿಲ್ಲುತ್ತಿದ್ದವ ನೀನು. ಆಗೆಲ್ಲ ಒಂದಿಡೀ ಊರಿಗೇ ಉಭಯ ಕುಶಲೋಪರಿ ಸಾಂಪ್ರತದ ಪತ್ರಗಳನ್ನು ಬಟವಾಡೆ ಮಾಡುತ್ತಿದ್ದವ ನೀನು. ಅಂಥ ನಿನಿಗೇ ಪತ್ರ ಬರೀತಿದೀನಲ್ಲ, ಇದು ಅಚ್ಚರಿ ಮತ್ತು ವಿಷಾದದ ಸಂಗತಿ. ಹೌದು, ಈ ಪತ್ರದಲ್ಲಿ ನಿನ್ನ ಪರಿಚಯವಿದೆ. ಹಳೆಯ ಮಧುರ ನೆನಪಿದೆ. ಕಳೆದು ಹೋದ ಕ್ಷಣಗಳ ಮಾಧುರ್ಯವಿದೆ. ಹಿಂದೆ ಯಾವುದೋ ಮನೆಯ ಬಾಗಿಲಲ್ಲಿ ನಿಂತು, ಕಾಗದ ಒಡೆದು ಓದುತ್ತಿದ್ದೆಯಲ್ಲ, ಈಗ ಕೂಡ ಅದೇ ಥರಾ ಈ ಪತ್ರವನ್ನು ಓದ್ತಾ ಹೋಗು, ಪ್ಲೀಸ್...
ನೆನಪಿದೆ ತಾನೆ? ಇಪ್ಪತ್ತು ವರ್ಷದ ಹಿಂದೆ ಮನೆಮನೆಯ ನೆಂಟನಾಗಿದ್ದವ ನೀನು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ಕೂಲ್ ಮುಂದಿನ ರಸ್ತೆಯಲ್ಲಿ ನೀನು ನಡೆದು ಬರುತ್ತಿದ್ದೆ. ನಿನ್ನನ್ನು ಕಂಡದ್ದೇ ತಡ, ಹೇಳುತ್ತಿದ್ದ ಪಾಠವನ್ನು ಅಲ್ಲಿಗೇ ನಿಲ್ಲಿಸುತ್ತಿದ್ದ ಮೇಷ್ಟ್ರು ರಾಗವಾಗಿ ಹಾಡುತ್ತಿದ್ದರು : ‘ಓಲೆಯ ಹಂಚಲು ಹೊರಡುವೆ ನಾನು/ತೋರಲು ಆಗಸದಲಿ ಬಿಳಿ ಬಾನು/ ಮನೆಯಲಿ ನೀವು ಬಿಸಿಲಲಿ ನಾನು/ಕಾಗದ ಬಂತು ಕಾಗದವು...’ ಮೇಷ್ಟ್ರ ಈ ಹಾಡಿನಲ್ಲಿ ಪ್ರೀತಿಯಿರುತ್ತಿತ್ತು. ಮೆಚ್ಚುಗೆ ಇರುತ್ತಿತ್ತು. ಅವರ ಹಾಡಿನಲ್ಲಿ, ಆ ರಾಗದಲ್ಲಿ ಎಂಥದ್ದೋ ಮೋದವಿರುತ್ತಿತ್ತು. ಮತ್ತು ಅದೇ ಕಾರಣಕ್ಕೆ ಆ ಹಾಡು ಎಲ್ಲ ಮಕ್ಕಳಿಗೂ ಬಾಯಿಪಾಠವಾಗಿತ್ತು! ಮರುದಿನ ನೀನು ಅಷ್ಟು ದೂರದಲ್ಲಿ ಕಂಡಾಕ್ಷಣ ನಾವು ಹಾಡುತ್ತಿದ್ದೆವಲ್ಲ -‘ಓಲೆಯ ಹಂಚಲು ಹೊರಡುವೆ ನಾನು...’
ಶಾಲೆಯ ಹಾದಿಯಿಂದಲೇ ನಮ್ಮ ಊರಿಗೂ ಬರ್ತಿದ್ದೆ ನೀನು? ನೀನು ಬಂದಾಗ ಯಾರೂ ಬೆರಗಾಗ್ತಾ ಇರಲಿಲ್ಲ. ಬರದಿದ್ದರೆ ಮಾತ್ರ ಎಲ್ಲರಿಗೂ ಏನೋ ಕಳೆದುಕೊಂಡಂತೆ ಆಗ್ತಾ ಇತ್ತು. ಮನೆಯ ಮುಂದೆ ಸೈಕಲ್ ನಿಲ್ಲಿಸಿ ‘ಟ್ರಿಣ್ ಟ್ರಿಣ್’ ಅನ್ನಿಸಿದರೆ ಸಾಕು -‘ಪೋಸ್ಟಾ , ಬಂದೆ ಬಂದೆ’ ಅನ್ನುತ್ತಲೇ ಮನೆಯಾಡತಿ ಓಡಿಬರುತ್ತಿದ್ದಳು. ಯಾವುದೋ ಕಾಗದಕ್ಕೆ ಕೈ ಒಡ್ಡುತ್ತಿದ್ದಳು. ನಿನ್ನ ಮುಖ ಕಂಡೇ-ಬಂದಿರುವುದು ಸಂತೋಷದ ಸುದ್ದಿಯೋ ; ದುಃಖದ ವಾರ್ತೆಯೋ ಎಂದು ತಿಳಿದುಬಿಡುತ್ತಿದ್ದಳು. ಸಂತೋಷದ್ದಾದರೆ ನಕ್ಕು ಮಾತಾಡುತ್ತಿದ್ದಳು. ಕೆಲವೊಮ್ಮೆ ಸರಸರನೆ ಕಾಗದ ಗೀಚಿ, ‘ಇದನ್ನು ಪೋಸ್ಟು ಮಾಡಬೇಕಲ್ಲಣ್ಣ...’ಎಂದು ಬೇಡುತ್ತಿದ್ದಳು!
ಹೌದಲ್ವ ಮಾರಾಯ? ಆಗೆಲ್ಲ ಗಡಿಯಾರದಷ್ಟೇ ಕರಾರುವಾಕ್ಕಾಗಿ ನೀನು ಕೆಲ್ಸ ಮಾಡ್ತಿದ್ದೆ. ಪ್ರತಿ ತಿಂಗಳ ಮೊದಲ ವಾರವೇ ಮನೆ ಮನೆಯ ಅಜ್ಜ-ಅಜ್ಜಿಗೆ ಪಿಂಚಣಿ ತಲುಪಿಸ್ತಿದ್ದೆ. ಅವರ ಇಳಿವಯಸ್ಸಿನ ನೆಮ್ಮದಿ ಕಾಪಾಡ್ತಿದ್ದೆ. ಆಗಷ್ಟೆ ಎಸ್ಸೆಸ್ಸೆಲ್ಸಿ ದಾಟಿದ ಹುಡುಗಿಗೆ ಪತ್ರ ಬಂದರೆ, ಅದು ಲವ್ ಲೆಟರ್ರೇ ಅಂತ ಪತ್ತೆ ಮಾಡಿ ಗುಟ್ಟಾಗಿ ಆಕೆಗೇ ಕೊಡ್ತಿದ್ದೆ. ಆ ಹುಡುಗಿಯ ಕಷ್ಟಕ್ಕೆ ನೋಯುತ್ತಿದ್ದೆ. ಅಂಥ ಪತ್ರಗಳನ್ನು ಹುಡುಗರಿಗೂ ಕೊಟ್ಟು -‘ಹ್ಯಾಂಗಿದಾಳಯ್ಯ ಆ ಹುಡುಗೀ’ ಎಂದು ಕೇಳುತ್ತಿದ್ದೆ. ಕಣ್ಣು ಹೊಡೀತಿದ್ದೆ. ನಿಮ್ ಮದುವೆಗೆ ನನ್ನನ್ನೂ ಕರೀರಯ್ಯ ಅಂತ ಪ್ರೀತಿಯಿಂದಲೇ ಡಿಮ್ಯಾಂಡು ಮಾಡುತ್ತಿದ್ದೆ...
ತಮಾಷೆ ನೋಡು?ನಿಂಗೊಂದು ಹೆಸರಿರುತ್ತಿತ್ತು. ಅದು ಎಲ್ಲರಿಗೂ ಚೆನ್ನಾಗೇ ಗೊತ್ತಿರ್ತಿತ್ತು. ಆದ್ರೂ ನಾವು ‘ಪೋಸ್ಟು ಮ್ಯಾನೂ’ ಅಂತಿದ್ವಿ. ನಡು ಮಧ್ಯಾಹ್ನ ನಿನ್ನ ಮುಖ ಕಂಡಾಗ ಖುಷಿ ಪಡುತ್ತಿದ್ವಿ.ಕೆಲವರಂತೂ ನೀನು ಪತ್ರ ಕೊಟ್ಟ ತಕ್ಷಣ, ‘ಅದೇನ್ ಸುದ್ದಿ ಕೇಳೋದಿದೆಯೋ...’ ಎಂದು ಗಾಭರಿಗೊಳ್ಳುತ್ತಿದ್ದರು. ಆಗೆಲ್ಲ ನೀನು ಅಕ್ಕರೆಯ ಅಮ್ಮನಾಗುತ್ತಿದ್ದೆ. ಸೇನೆಯಲ್ಲಿ ಮಗ ಸತ್ತ, ತವರಿನಲ್ಲಿ ತಾಯಿ ಸತ್ತ, ಅಣ್ಣನಿಗೆ ಆಕ್ಸಿಡೆಂಟ್ ಆದ ಸೂತಕದ ಸುದ್ದಿ ಹೇಳಿದವನೇ, ಸಮಾಧಾನದ ಮಾತಾಡುತ್ತಿದ್ದೆ.
ಆಕಸ್ಮಾತ್ ದಿಢೀರನೆ ಬಂದದ್ದು ಕೆಲಸದ ಆರ್ಡರ್ ಆಗಿದ್ದರೆ ಇಡೀ ಮನೆಯ ಖುಷಿಗೆ ಕಾರಣವಾಗ್ತಿದ್ದೆ. ಇದರ ಜತೆಗೆ ಓದು, ಬರಹ ಬರದ ಅದೆಷ್ಟೋ ಮನೆಯವರಿಗೆ ಪತ್ರ ತಲುಪಿಸುತ್ತಿದ್ದನೂ ನೀನೆ, ಅದನ್ನ ಓದುತ್ತಿದ್ದವನೂ ನೀನು. ಅದಕ್ಕೆ ಮಾರೋಲೆ ಬರೆಯುತ್ತಿದದವ ಕೂಡ ನೀನೆ. ಅಂಥ ವೇಳೆಯಲ್ಲಿ ರಾಗ-ದ್ವೇಷವನ್ನು ಮೀರಿ ನಿಂತು ಮನೆ ಮನೆಯ ಗುಟ್ಟು ಕಾಪಾಡುತ್ತಿದ್ದೆಯಲ್ಲ, ಅದೆಲ್ಲ ನಿನ್ನಿಂದ ಹ್ಯಾಗೆ ಸಾಧ್ಯವಾಯ್ತು ಮಾರಾಯ?
ಈಗ ಏನಾಗಿದೆ ನೋಡು? ಭಾರತೀಯ ಅಂಚೆ ಇಲಾಖೆಗೆ ಬರಾಬರ್151ವರ್ಷ ತುಂಬಿದೆ. ಈ ಸಂಬಂಧವಾಗಿ ಅದೇ ಇಲಾಖೆಯ ‘ದೊಡ್ಡಜನ’ಭಾಷಣ ಮಾಡ್ತಿದಾರೆ. ಪುಸ್ತಕ ಬರೀತಿದಾರೆ. ಜಾಹೀರಾತು ಕೊಡ್ತಾ ಇದಾರೆ. ಈ ಮಧ್ಯೆ ಅದೇ ಜನ ನಿನ್ನನ್ನ ಮರೆತೇ ಬಿಟ್ಟಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ನಿನ್ನ ಸೇವೆಯಲ್ಲಿ, ಪ್ರಾಮಾಣಿಕತೆಯಲ್ಲಿ ವಿಪರೀತ ನಂಬಿಕೆಯಿಟ್ಟಿದ್ದ ಮಂದಿ ಈಗ ‘ಪೋಸ್ಟಾ’ಅದು ತುಂಬಾ ಲೇಟು ಕಣ್ರೀ ಎಂದು ರಾಗ ಎಳೆಯುತ್ತಿದ್ದಾರೆ.
ಯಾಕಪ್ಪ ಹೀಗಾಯ್ತು ಅಂದೆಯಾ? ಕಾರಣ ಸಿಂಪಲ್. ಈಗ ನಮಗೆ ಸಂಬಂಧ ಭಾರವಾಗಿದೆ. ಗೆಳೆತನ ಬೇಡವಾಗಿದೆ. ಸಹನೆ ಮಾಯವಾಗಿದೆ. ಪತ್ರ ಬರೆಯುವ ಉಮ್ಮೇದಿ ಕಣ್ಮರೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಇ-ಮೇಲ್ ಐಡಿ ಇದೆ. ಎಲ್ಲರ ಬಳಿಯೂ ಮೊಬೈಲ್ ಎಂಬ ಮಾಯೆಯಿದೆ. ಈ ಹಿಂದೆ ತುಂಬ ಪ್ರೀತಿಯಿಂದ ನೂರಾ ಇಪ್ಪತ್ತೆಂಟು ಸಾಲನ್ನೂ ಪುಟ್ಟ ಕಾಗದದಲ್ಲಿ ಬರೀತಿದ್ದ ನಾವೇ, ಈಗ ಸಿಡಿಮಿಡಿಯಿಂದ ನಾಲ್ಕೇ ಸಾಲಿನ ಎಸ್ಸೆಮ್ಮೆಸ್ ಕಳಿಸಿ ಸುಮ್ಮನಾಗ್ತಿದೀವಿ! ಅಜ್ಜನ ಪಿಂಚಣಿಗೆ, ಅಜ್ಜಿಯ ನೆಮ್ಮದಿಗೆ ಬ್ಯಾಂಕಿನಲ್ಲಿ ಅಕೌಂಟು ತೆಗೆದು ‘ಆರಾಮ್’ಆಗಿದೀವಿ. ಪೋಸ್ಟು ತುಂಬಾ ಲೇಟು, ಕೊರಿಯರ್ರೇ ಬೆಟರ್ರು. ಇ-ಮೇಲ್ ಅದಕ್ಕಿಂತ ಬೆಸ್ಟ್ ಎಂದು ಮಾತು ಮರೆಸುತ್ತಿದ್ದೇವೆ! ನಿನ್ನನ್ನ ಪೂರ್ತಾಪೂರ್ತಾ ಮರೆತೇಬಿಟ್ಟಿದ್ದೀವಿ! ಉಹುಂ, ನಮಗೆ ಪಾಪಪ್ರಜ್ಞೆ ಕಾಡ್ತಾನೇ ಇಲ್ಲ , ರವಷ್ಟೂ...
ಆದ್ರೆ, ಮೈ ಡಿಯರ್ ಪೋಸ್ಟ್‌ಮ್ಯಾನ್, ಇದೆಲ್ಲದರ ಮಧ್ಯೆಯೂ ನಿನ್ನನ್ನ ಪ್ರೀತಿಸಲಿಕ್ಕೆ, ನಿನ್ನನ್ನ ನೆನೆದು ಹೆಮ್ಮೆ ಪಡಲಿಕ್ಕೆ, ಖುಷಿಯಿಂದಲೇ ನಿನಗೆ ಚೆಂದದ ಸೆಲ್ಯೂಟು ಹೊಡೆಯಲಿಕ್ಕೆ ಕಾರಣವಿದೆ. ಏನೆಂದರೆ, ನೀನು; ನಿನ್ನವರು ಇಡೀ ಜನ್ಮದಲ್ಲಿ ಒಂದು ಪೈಸೆ ಲಂಚಕ್ಕೆ ಕೈ ಒಡ್ಡಿದವರಲ್ಲ, ಕೆಲಸಕ್ಕೆ ಕಳ್ಳ ಬಿದ್ದವರಲ್ಲ, ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ನೆಪ ಹೇಳಲಿಲ್ಲ, ಇಂದಿನ ಕೆಲಸವನ್ನು ನಾಳೆ ಮಾಡಿದರಾಯ್ತು ಎನ್ನಲೂ ಇಲ್ಲ. ನಿಮ್ಮ ಕರ್ತವ್ಯ ನಿಷ್ಠೆಗೆ ಶರಣು ಶರಣು...
ಇಲ್ಲ, ಇವತ್ತಿನ ಪರಿಸ್ಥಿತಿ ನೋಡಿದರೆ, ನಿನ್ನ ಬದುಕಿನ ವೈಭವದ ದಿನಗಳನ್ನು ಮತ್ತೆ ಕಂಡೇವೆಂಬ ನಂಬಿಕೆಯಲ್ಲ. ಈಗ ಕಾಲ ಬದಲಾಗಿದೆ. ನಾವೂ ಬದಲಾಗಿದೀವಿ. ಆದರೂ ಆಗಾಗ ನಿನ್ನನ್ನ ನೆನಪು ಮಾಡಿಕೊಳ್ತೀವಿ. ಆ ನೆನಪಿನ ದೋಣಿಯಲ್ಲಿ ತೇಲಿ ಹೋಗ್ತೀವಿ.
ಮರೆತು ಬಿಡುವ ಮುನ್ನ ನಿಂಗೆ ಹೇಳಬಹುದಾದ ಮಾತು- ‘ನಿಂಗೆ ತುಂಬ ಒಳ್ಳೆಯದಾಗಲಿ ನಿನಗಿದ್ದ ಒಳ್ಳೆಯ ಬುದ್ದಿ ನಮಗೂ ಬರಲಿ’.
(ಸ್ನೇಹ ಸೇತು : ವಿಜಯ ಕರ್ನಾಟಕ)
No comments:
Post a Comment